ಶುಕ್ರವಾರ, ಅಕ್ಟೋಬರ್ 29, 2010

ಮೂರು ಹನಿ(ಣತೆ)ಗಳು....

ಗೆಳತೀ ನೀ
ಹಚ್ಚಿಟ್ಟು ಹೋದೆಯಲ್ಲಾ
ಪ್ರೀತಿ ಹಣತೆ ಹೃದಯದಲ್ಲಿ
ನನಗೀಗ
ನಿತ್ಯ ದೀಪಾವಳಿ..!

...............

ಹುಡುಗೀ...
ಈ ಉರಿವ ಹಣತೆ
ಈ ಸಾಲು ದೀಪ
ಎಲ್ಲ ನಮಗೆ ಯಾಕೆ ಬೇಕು?
ನಿತ್ಯ ಹೀಗೇ..
ಇದ್ದರೆ ಸಾಕು
ಮನೆ ಬೆಳಗಲು
ನಿನ್ನ ಕಣ್ಣ ಬೆಳಕು..

.............

ಒಂದಷ್ಟು ದೀಪ ಹಚ್ಚಲು
ಮೂಡಿತು ಬೆಳಕು
ಮನೆಯ ಸುತ್ತಲೂ
ಆಗೊಮ್ಮೆ ಕಣ್ಣು ಮುಚ್ಚಲು
ಎಲ್ಲೆಲ್ಲೂ ಕತ್ತಲು !
ಅರಿವಾಯಿತು ಸತ್ಯ
ಮನೆಯಲಿದ್ದರಷ್ಟೆ ಸಾಲದು ಬೆಳಕು
ನಮ್ಮ ಮನದಲ್ಲಿರಬೇಕು

ಶುಕ್ರವಾರ, ಅಕ್ಟೋಬರ್ 15, 2010

ನೀನಿಲ್ಲದೆ........

ನಿನ್ನಿರವಿನ ಬಲವಿರದಿರೆ
ಈ ಬದುಕಿಗೆ ಏನಿದೆ ಅರ್ಥ?
ಕರುಣೆಯ ಕರ ಚಾಚುತ ಮನ
ಬೆಳಗಿಸು ಸುಖ ಸಂತಸ ತರುತ

ಈ ನೀರು ಮಳೆ ಗಾಳಿ,ಹಸಿರು
ರವಿ ಚಂದ್ರ ಹೆಳೆಯುವ ತಾರೆ
ಎಲ್ಲವು ನಿನ್ನಿರವಿನ ಛಾಯೆ
ಎದೆಗೂಡಲಿ ಬೆಳಕರಳಿಸು
ಈ ಬದುಕನು ಕೈಚಾಚುತ ತಾಯೆ

ಇಳಿದು ಬಾ ಇಳೆಗೆ,ಒಲವ ತಾ ನಮಗೆ
ಹಸಿರಾಗಿಸು ಜಗವ ಸುರಿಮಳೆಯಾಗಿ
ಉಸಿರಾಡಲಿ ಹಳೆಬೇರಲಿ..
ಜೊತೆಯಾಗುತ ಹೊಸ ಚಿಗುರಿಗೆ ನೆರಳಾಗಿ..

ಈ ಜೀವನ ಹೋರಾಟವು ಕ್ಷಣ ಕ್ಷಣಕೂ
ಆಧರಿಸುತೆಮ್ಮನು ಶಕ್ತಿಯ ತುಂಬಿಸು
ಹರಿಯುವ ನೆತ್ತರ ಕಣಕಣಕೂ
ನಿನ್ನಿಂದಲೇ ಬೆಳಕಾಗಲಿ ತಾಯೇ
ನಮ್ಮ ಈ ಕಪ್ಪಡರಿದ ಬದುಕು.

ಭಾನುವಾರ, ಅಕ್ಟೋಬರ್ 3, 2010

ಬಡವರಾದರೇನು ಪ್ರಿಯೆ.....?

ನಾವು ಬಡವರಾದರೇನು ಪ್ರಿಯೆ
ನಮ್ಮ ಪ್ರೀತಿಗೇನು ಬರವೇ?
ಅರಿತು ಬೆರೆತು ಬಾಳಲು
ಒಲವೆ ನಮಗೆ ಒಡವೆ..

ನಿನ್ನ ಪ್ರೀತಿ
ಮೊಗೆದುಮೊಗೆದು ಕೊಟ್ಟರೂ
ಬತ್ತದಾ ಸೆಲೆ..
ನನಗೆ ನೀನು,ನಿನಗೆ ನಾನು
ಹರಿಸು ನಿತ್ಯ ಮುತ್ತಿನಾ ಮಳೆ

ನನ್ನೆದೆ ಅರಮನೆಯೊಳಗೀಗ
ನೀನೇ ನನ್ನಯ ಅರಸಿ..
ಕಣ್ಣಿನಲ್ಲಿ ಕಣ್ಣನಿಟ್ಟು ನಿನ್ನ ಕಾಯುವೆ
ಎಲ್ಲ ನೋವ ಮರೆಸಿ

ಬದುಕ ಕಟ್ಟಲೊಂದು ಬಯಕೆ
ನನಗೆ ನೀನೇ ಸ್ಫೂರ್ತಿ..
ಮರೆಯಲಾರೆ ನಿನ್ನ ನೆನಪ
ಉಸಿರು ಮುಗಿವವರೆಗೆ ಪೂರ್ತಿ