ಶುಕ್ರವಾರ, ನವೆಂಬರ್ 16, 2012

ದುರಂತ

 ಹೀಗೊಂದು ಕಥೆ....
     ಕಳೆದ ಎರಡು ವಾರಗಳಿಂದ ಶ್ಯಾಮರಾಯರ ಮನಸ್ಸಿಗೆ ಸಮಾಧಾನವಿರಲಿಲ್ಲ.ರಾತ್ರಿ ಮಲಗಿದರೆ ನಿದ್ದೆಯೂ ಹತ್ತುತ್ತಿರಲಿಲ್ಲ.ಎರಡು ವಾರದ ಹಿಂದೆ ನಡೆದ ಆ ಘಟನೆ ಕಣ್ಣ ಮುಂದೆ ಬಂದು ಅವರ ಕೋಪ ನೆತ್ತಿಗೇರುವಂತೆ ಮಾಡುತ್ತಿತ್ತು.ಆ ಘಟನೆ ಬೇರೆ ಯಾರಿಗೂ ಸಂಬಂಧಿಸಿದ್ದರೂ ಈ ಮಟ್ಟದ ಸುದ್ದಿಯಾಗುತ್ತಿರಲಿಲ್ಲವೇನೋ!ಆದರೆ ಶ್ಯಾಮರಾಯರೇ ಅದರಲ್ಲಿ ಭಾಗಿಯಾಗಿದ್ದಾರೆಂದ ಮೇಲೆ ಊರಿಡೀ ಪ್ರಚಾರದ ತೀವ್ರ ಸ್ವರೂಪ ಪಡೆಯಲು ಹೆಚ್ಚು ಸಮಯ ಬೇಕಾಗಲಿಲ್ಲ.ತಾನು ಇದುವರೆಗೆ ಕಾಪಾಡಿಕೊಂಡು ಬಂದಿದ್ದ ಘನತೆಗೆ ಒಂದೆಡೆ ಕುತ್ತು ಬಂದಿದ್ದರೆ,ಇನ್ನೊಂದೆಡೆ ತನಗೊಬ್ಬ ವೈರಿ ಹುಟ್ಟಿಬಿಟ್ಟನಲ್ಲಾ! ಎಂಬ ದಿಗಿಲು.ಇವೆರಡೂ ರಾಯರನ್ನು ನಿದ್ದೆಗೆಡುವಂತೆ ಮಾಡಿದ್ದವು.ಈವರೆಗೆ ತಾನು ಮಾಡಿದ್ದೇ ಸರಿ,ನಡೆದಿದ್ದೇ ದಾರಿ ಎಂಬಂತಿದ್ದ ರಾಯರ ಬದುಕಿನಲ್ಲಿ ಆ ಘಟನೆ ದೊಡ್ಡ ಮಟ್ಟದ ಆಘಾತವನ್ನೇ ನೀಡಿತ್ತು.ನಿನ್ನೆ ಅದಕ್ಕೊಂದು ತೆರೆ ಎಳೆದ ಮೇಲೆಯೇ ಅವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದು.
   ಸುಮಾರು ನೂರೈವತ್ತು ಇನ್ನೂರು ಮನೆಗಳಿರುವ ಆ ಊರಿನಲ್ಲಿ ಇವರದೇ ದೊಡ್ಡ ಮನೆತನ. ಮನೆಯಲ್ಲಿ ಪುಟ್ಟ ಸಂಸಾರ ಒಬ್ಬಳೇ ಮಗಳು.ಎಲ್ಲರೂ ತಿಳಿದಂತೆ ಆತ ದೊಡ್ಡ ದೈವ ಭಕ್ತ.ತಾನು ಏನು ಮಾಡಿದರೂ ಅದೆಲ್ಲಾ ತಾನು ನಂಬಿಕೊಂಡು ಬಂದಿರುವ ಕಲ್ಕುಡನ ಕಾರ್ಣಿಕದ ಬಲ ಎನ್ನುತ್ತಿದ್ದರು.ಹೀಗೆ ಎಲ್ಲ ಕೆಲಸಗಳನ್ನು ದೈವವನ್ನೇ ಮುಂದಿರಿಸಿಕೊಂಡೇ ಮುಗಿಸುತ್ತಾ ಬರುತ್ತಿದ್ದರು.ಹೀಗಾಗಿ ಇಡೀ ಊರಿಗೆ ಶ್ಯಾಮರಾಯರ ಹೆಸರೆತ್ತಿದರೆ ಸಾಕು,ಒಂದು ರೀತಿಯ ಭಯ,ಅವರ ದೈವವೆಂದರೆ ಇನ್ನೂ ಎಲ್ಲಿಲ್ಲದ ಭಯ.ಅವರನ್ನು ಇದುವರೆಗೆ ಎದುರು ಹಾಕಿಕೊಂಡವರಿಲ್ಲ.ಎದುರಾಡಿದವರು ಬದುಕಿ ಉಳಿದಿಲ್ಲ.ಅವರ ತಂಟೆಗೆ ಹೋದರೆ ಅದರ ಪರಿಣಾಮವನ್ನು ಊಹಿಸಿಯೇ ಜನ ಸುಮ್ಮನಾಗುತ್ತಿದ್ದರು. ಅಷ್ಟು ಜೋರಿನ ರಾಯರು ಹಾಗೂ ಅವರ ದೈವ.ಅದರಲ್ಲಿ ಎರಡು ಮಾತಿಲ್ಲ.ಇದು ಇಡೀ ಊರೇ ನಂಬಿದ ವಿಚಾರ.ಪೆಟ್ಟೊಂದು ತುಂಡೆರಡು !!ಎಂಬ ರೀತಿ, ಹೀಗೆ ಒಂದು ರೀತಿಯ ಹಿಡಿತವನ್ನೇ ಆ ಊರಲ್ಲಿ ಸಾಧಿಸಿಕೊಂಡು ಬಂದಿದ್ದರು.
    ಈಗಲೂ ರಾಯರು ಮಾತಾಡುತ್ತಿರಬೇಕಾದರೆ,ಕೆಲವು ವರ್ಷಗಳ ಹಿಂದೆ ತಮ್ಮ ಹಸು ಪಕ್ಕದ ಅಚ್ಚಪ್ಪನ ಗದ್ದೆಯ ನೇಜಿ ತಿನ್ನುತ್ತಿದ್ದಾಗ ಅವನ ಕಲ್ಲಿನ ಏಟು ಬಿದ್ದು ಹಸು ಸತ್ತಿದ್ದು,ಕೊನೆಗೂ ಒಂದು ದಿನ ಆತ ಬಿದ್ದು ತಲೆ ಒಡೆದು ಅವನಿಗೆ ಹುಚ್ಚು ಹಿಡಿಯುವಂತಾಗಿದ್ದು.ಹಾಗೆಯೇ ಮೂಲೆಮನೆಯ ಚೀಂಕ್ರ ಕೂಡಾ ತಮ್ಮ ಮನೆಯ ತೋಟದ ಕಂಗಿನಿಂದ ಅಡಿಕೆ ಕದಿಯಲು ಹೋಗಿ ಮರದಿಂದ ಬಿದ್ದು ಸೊಂಟ ಮುರಿದು ನೆಗರುತ್ತಿರುವುದನ್ನು ಕಂಡು ತಮ್ಮ ದೈವದ ಕಾರಣಿಕದ ಬಗ್ಗೆ ಊರಿಡೀ ಹೇಳಿಕೊಂಡು ಮೀಸೆ ತಿರುವಿಕೊಳ್ಳುತ್ತಾರೆ.ಆದರೆ ಅವರೆಲ್ಲಾ ಈ ಸ್ಥಿತಿಗೆ ಬರಲು ಕಾರಣ ರಾಯರ ಪೆಟ್ಟೇ ಹೊರತು ಭೂತದ್ದಲ್ಲ ಎಂದು ಹೇಳುವ ಧೈರ್ಯ ಯಾರಿಗೂ ಇರಲಿಲ್ಲ.
      ಆ ಘಟನೆ ನಡೆದು ಇಂದಿಗೆ ಸುಮಾರು ಮೂರು ವಾರಗಳಾಗುತ್ತ ಬಂದಿವೆ.ನನ್ನ ನಾಶಕ್ಕೆ ಗುರಿಯಿಟ್ಟವನನ್ನು ಹಿಡಿದು ತಕ್ಕ ಶಿಕ್ಷೆ ವಿಧಿಸಿದರೆ ನಿನಗೆ ನೇಮ ಕೊಡುತ್ತೇನೆ ಎಂದು ಎಂದಿನಂತೆ ಎಲ್ಲರ ಮುಂದೆ ತಾನು ನಂಬಿದ ದೈವ ಕಲ್ಕುಡನಿಗೆ ಹರಕೆ ಹೊತ್ತಿದ್ದರು..ಹೀಗೆ ಅವರು ಅಂದುಕೊಂಡಿದ್ದೆಲ್ಲಾ ಸುಸೂತ್ರವಾಗಿ ನಡೆದಿತ್ತು.ಹೀಗೆ ಅವರ ಮನೆಯಲ್ಲಿ ಅಂದು ಕಲ್ಕುಡನ ನೇಮಕ್ಕೆ ತಯಾರಿ ನಡೆಯುತಿತ್ತು.ಕೊಂಬು ವಾದ್ಯ ತೆಂಬರೆ ಪಾಡ್ದನದ ದನಿ ಹೊಸ ಅಲೌಕಿಕ ಪ್ರಪಂಚವನ್ನೇ ಸೃಷ್ಟಿಸಿದಂತಿತ್ತು.ಸೇರಿದ್ದ ಮಂದಿಯ ಗದ್ದಲ ಜಾತ್ರೆಯನ್ನು ಹೋಲುವಂತಿತ್ತು.ಆದರೆ ನೆರೆಯ ನೀಲಕ್ಕನಿಗೆ ಈ ಗೌಜಿ ಗದ್ದಲ ಕಂಡೊಡನೆ ಚೂರಿಯಿಂದ ಇರಿದಂತಾಗುತ್ತಿತ್ತು,ತನ್ನ ಕಣ್ಣುಗಳೇ ಕಿತ್ತು ಬಂದಂತೆ ಭಾಸವಾಗಿ ಕಣ್ಣೀರ ಹನಿ ಅವಳಿಗರಿವಿಲ್ಲದಂತೆ ಕೆಳಗಿಳಿಯುತ್ತಿತ್ತು.
     ನೀಲಕ್ಕ ಮತ್ತು ನಾರ್ಣಪ್ಪ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕೊನೆಯವನೊಬ್ಬನೇ ಗಂಡು ಮಗು ಚಂದ್ರ.ಮನೆಯಲ್ಲಿ ತೀರ ಬಡತನವಿದ್ದರೂ ಹೊಟ್ಟೆಬಟ್ಟೆಗೇನೂ ಕಡಿಮೆ ಮಾಡಿರಲಿಲ್ಲ.ನಮ್ಮ ಮನೆಗೆ ಇವನೊಬ್ಬನೇ ವಂಶೋದ್ದಾರಕ ಎಂದು ಎಲ್ಲರಿಗಿಂತಲೂ ಹೆಚ್ಚು ಮುದ್ದಿನಿಂದಲೇ ಸಾಕಿದ್ದರು.ಪತಿ ನಾರ್ಣಪ್ಪ ಹೆಣ್ಣು ಮಕ್ಕಳಿಗೆಲ್ಲ ಮದುವೆ ಮಾಡಿ ತನ್ನ ಹೊರೆ ಇಳಿಸಿ ಇಹಲೋಕದ ಯಾತ್ರೆ ಮುಗಿಸಿದಾಗ ಚಂದ್ರ ಇನ್ನೂ ಸಣ್ಣವನು.ಇವನು ಚೆನ್ನಾಗಿ ಓದಿ ಮುಂದೆ ಬರಬೇಕೆಂಬ ಹಂಬಲ ನೀಲಕ್ಕನದಾಗಿದ್ದರೂ ಈ ಬಡತನದ ಮಧ್ಯೆ ಆಕೆ ಅಸಹಾಯಕಳಾಗಿದ್ದಳು.ಓದಿನಲ್ಲಿ ಮುಂದೆ ಇದ್ದ ಆತ ಶಾಲೆಗೆ ಅರ್ಧದಲ್ಲಿಯೇ ಪೂರ್ಣ ವಿರಾಮವಿಟ್ಟು, ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳುವ ದೃಷ್ಟಿಯಿಂದ ಓಡಿ ಬಂದಿದ್ದು ಮುಂಬಯಿಗೆ..
    ಆರಂಭದ ದಿನಗಳಲ್ಲ್ಲಿ ಊರಿನ ಪರಿಚಯದವರ ಹೋಟೆಲುಗಳಲ್ಲಿ ಕೆಲಸ ಮಾಡುತ್ತಾ,ಹೋಟೇಲ್ ಹುಡುಗರ ಬದುಕಿಗೆ ದಾರಿ ದೀಪವಾಗಿದ್ದ ಸಂಜೆ ಕಾಲೇಜಿಗೆ ಸೇರಿ, ಪದವಿ ಮುಗಿಸಿ ಅಲ್ಲಿಯೇ ದಿನಪತ್ರಿಕೆ ಕಚೇರಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ನಂತರ ಆತನ ಬದುಕಿನ ದಿಕ್ಕು ಬದಲಾಗಿತ್ತು.ಇತ್ತ ನೀಲಕ್ಕನಿಗೂ ವಯಸ್ಸಾಗತೊಡಗಿತ್ತು..ಆಕೆಗೂ ಇಲ್ಲಿ ಯಾರೂ ದಿಕ್ಕು ದೆಸೆಯಿರಲಿಲ್ಲ.ಸುಮಾರು ಆರೇಳು ವರ್ಷಗಳನ್ನು ಕಳೆದ ಚಂದ್ರ ಇದನ್ನೆಲ್ಲಾ ಯೋಚಿಸಿ, ಮನಸ್ಸು ಬದಲಾಯಿಸಿ ಊರ ಕಡೆ ಮುಖ ಮಾಡಿದ್ದ.ಊರಿಗೆ ಬಂದವನಿಗೆ ಕೆಲಸ ಸಿಗುವುದೇನೂ ಕಷ್ಟವಾಗಲಿಲ್ಲ.ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಸೇರಿಕೊಂಡ ಆತ ಅಲ್ಪ ಸಮಯದಲ್ಲಿಯೇ ಎಲ್ಲರಿಗೂ ಮೆಚ್ಚುಗೆಯಾಗಿ ಬಿಟ್ಟಿದ್ದನು.ತನ್ನ ವರದಿ ವಿಶ್ಲೇಷಣೆಗಳಿಂದ ಜನಪ್ರಿಯನಾಗಿ ಬಿಟ್ಟಿದ್ದನು.ಅನೇಕ ಜನರ ಘನಂದಾರಿ ಕೆಲಸಗಳ ಬಂಡವಾಳ ಬಯಲು ಮಾಡಿ ಸಮಾಜ ಸುಧಾರಣೆಯ ಪಣ ತೊಟ್ಟಿದ್ದನು.ಹೀಗಾಗಿ ಅವನ ಬರಹಗಳಿಗೆ ಅಭಿಮಾನಿಗಳು ಸಾಕಷ್ಟಿದ್ದರು.ಇವನ ಬರಹಗಳಿಗೆ ಧೈರ್ಯ ಹುಮ್ಮಸ್ಸು ತುಂಬುತ್ತ ಇದ್ದವರಲ್ಲಿ ಸೌಮ್ಯ ಕೂಡಾ ಒಬ್ಬಳು.ಈಕೆ ಬೇರಾರೂ ಅಲ್ಲ, ಶ್ಯಾಮರಾಯರ ಮುದ್ದಿನ ಮಗಳು.ಇನ್ನೂ ಪದವಿ ಓದುತ್ತಿದ್ದ ಆಕೆಗೆ ಇವನ ಬರಹ ಅಂಕಣಗಳೆಂದರೆ ಅಚ್ಚುಮೆಚ್ಚು.ಜೊತೆಗೆ ಅವನನ್ನೂ ಕೂಡಾ ಬಹಳವಾಗಿ ಮೆಚ್ಚಿಕೊಂಡಿದ್ದಳು, ಇಷ್ಟಪಟ್ಟಿದ್ದಳು.ಅವನಿಗೂ ಅವಳ ಒಂದೊಂದು ಅಭಿಮಾನದ ಮಾತು ಪ್ರೇರಣೆ ನೀಡುತ್ತಿತ್ತು.ಹೀಗೆ ಅವರ ಅಭಿಮಾನದ ಗೆಳೆತನ ಅನುರಾಗದವರೆಗೆ ಬಂದು ಮುಟ್ಟಲು ಹೆಚ್ಚು ಸಮಯ ಬೇಕಾಗಲಿಲ್ಲ.ಇದು ಇವರಿಬ್ಬರ ಹೊರತಾಗಿ ಮೂರನೆಯವರ ಕಣ್ಣಿಗೆ ಬಿದ್ದಿರಲಿಲ್ಲ.
    ಹೀಗಿರಬೇಕಾದರೆ ನೆರೆಯ ಕರಿಯಪ್ಪನ ನಡುವೆ ಹಾಗೂ ಶ್ಯಾಮರಾಯರ ನಡುವೆ ಜಾಗದ ತಕರಾರು ಎದ್ದಿತ್ತು.ರಾಯರ ತೋಟದ ಮನೆಯಿದ್ದ ಜಾಗದ ಸ್ವಲ್ಪ ಭಾಗ ತನ್ನದೆಂಬುದು ಅವನ ವಾದ ಆದರೆ ಆ ಜಾಗದ ಬಗ್ಗೆ. ಮಕ್ಕಳಿಲ್ಲದೆ ಹಿಂದುಮುಂದಿಲ್ಲದ ಅವನಿಗೆ ಅಷ್ಟೇನೂ ಒಲವಿರಲಿಲ್ಲ.ಆದರೂ ರಾಯರಿಗಾಗದ ಕೆಲವರು ಅವನ ಕಿವಿಯೂದಿ ಜಗಳಕ್ಕೆ ಕುಮ್ಮಕ್ಕು ನೀಡಿ ತಾವು ಖುಷಿ ಪಡುತ್ತಿದ್ದರು.ಅದೊಂದು ದಿನ ತಡರಾತ್ರಿ ಸೇರಿದ ರಾಯರಿಗಾಗದ ಕೆಲವರು ಈ ರೀತಿ ಕಾದಾಡುತ್ತಿದ್ದರೆ ಲಾಭವಿಲ್ಲ, ರಾಯರ ತೋಟದ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ದಂಧೆ ನಡೆಯುತ್ತಿರುವುದು ಇಂದು ನಿನ್ನೆಯದಲ್ಲ.ಈ ವಿಷಯ ತಿಳಿದಿದ್ದವರು ಯಾರೂ ಪೋಲೀಸರಿಗೆ, ಅಧಿಕಾರಿಗಳಿಗೆ ತಿಳಿಸುವ ಧೈರ್ಯ ಮಾಡಿರಲಿಲ್ಲ.ಈ ಸಂಗತಿ ಒಮ್ಮೆ ಹೊರಕ್ಕೆ ಬಂದರೆ ರಾಯರ ಮಾನ ಹರಾಜಾಗುತ್ತದೆ, ರಾಯರು ಒಮ್ಮೆ ಕಂಬಿ ಎಣಿಸಿದರೆ ಮತ್ತೆ ನಮ್ಮ ತಂಟೆಗೆ ಬರುವುದಿಲ್ಲ,ಎಂದು ಲೆಕ್ಕಾಚಾರ ಹಾಕಿ ತಂತ್ರ ಹೂಡಿದರು.ಆದರೆ ಆ ಧೈರ್ಯ ಮಾತ್ರ ಅಲ್ಲಿ ಯಾರಿಗೂ ಇರಲಿಲ್ಲ.ಆಗ ಅವರ ಕಣ್ಣಿಗೆ ಬಿದ್ದವನೇ ಚಂದ್ರ.ಅವನೂ ಅಷ್ಟೇ ಹಿಂದು ಮುಂದು ಯೋಚಿಸದೆ ಮೊಂಡು ಧೈರ್ಯ ಮಾಡಿ ರಾಯರು ನಾಲ್ಕು ದಿನಗಳ ಮಟ್ಟಿಗೆ ಕಂಬಿ ಎಣಿಸುವಂತೆ ಮಾಡಿ ರಾಯರ ಸ್ವಾಭಿಮಾನಕ್ಕೆ ಕೆಸರೆರಚಿದ್ದ.ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ರಾಯರು ಮನಸ್ಸಿನಲ್ಲಿಯೇ ಕುದಿಯ ತೊಡಗಿದರು.ಕರಿಯಪ್ಪನೇ ಯಾರದೋ ಒತ್ತಡಕ್ಕೆ ಬಿದ್ದು ಈ ಕೆಲಸ ಮಾಡಿರಬಹುದು ಎಂಬ ಸಂಶಯದ ಸುಳಿಯೊಂದು ಅವರ ಸುತ್ತ ಸುತ್ತುತ್ತಿತ್ತು.ನನ್ನ ಈ ಸ್ಥಿತಿಗೆ ಕಾರಣನಾದವನ ಗತಿ ಕಾಣಿಸದೆ ಬಿಡಲಾರೆ ಎಂದು ಪಣತೊಟ್ಟ ಅರು ಎಂದಿನಂತೆ ತಾನು ನಂಬಿದ ದೈವ ಕಲ್ಕುಡನಿಗೆ ಹರಕೆಯಿಟ್ಟರು.ಈಗ ಅವರ ಮನಸ್ಸು ನಿರಾಳವಾಗಿತ್ತು.
     ಹೀಗೆ ಒಂದೆರಡು ದಿನ ಕಳೆದಿರಬೇಕು, ಮನೆಗೆಲಸದ ಮಂಜು ಹೇಳಿದ ಮಾತು ಕೇಳಿ ಅವರಿಗೆ ನಂಬಲಾಗಲಿಲ್ಲ."ಹೌದು ಧಣೀ ನಿನ್ನೆ ವಸಂತನ ಗೂಡಂಗಡಿಯ ಹತ್ರ ಇದೇ ಸುದ್ದಿ ಮಾತಾಡುತ್ತಿದ್ದರು.ನನಗೂ ನಂಬಿಕೆ ಬರಲಿಲ್ಲ ಆದರೆ ವಿಷಯ ಎಲ್ಲಾ ತಿಳಿದಾಗ ನನಗೂ ಇದು ನಿಜ ಇರಬೇಕೆಂದು ನಂಬಿಕೆ ಬಂತು"ಎಂದಾಗ ರಾಯರಿಗೆ ಅಷ್ಟೇ ಸಾಕಿತ್ತು.ನನ್ನ ಕಣ್ಣ ಮುಂದೆಯೇ ಬೆಳೆದು ಈಗ ನನ್ನ ನಾಶಕ್ಕೆ ಪಣ ತೊಟ್ಟವನ ಸರ್ವನಾಶ ಮಾಡದೆ ಇರಲಾರೆ ಎಂದು ಹಲ್ಲು ಮಸೆಯತೊಡಗಿದರು.
    ಆ ದಿನ ಸಂಜೆ ಚಂದ್ರ ಎಂದಿನಂತೆ ತನ್ನ ಬೈಕನ್ನು ಎಂಭತ್ತರ ವೇಗದಲ್ಲಿ ಹಾರಿಸಿಕೊಂಡು ಬರುತ್ತಿದ್ದಾಗ ಅಡ್ಡವಾಗಿ ಬಂದ ಲಾರಿಯೊಂದು ಢಿಕ್ಕಿ ಹೊಡೆದು ಹೋದ ರಭಸಕ್ಕೆ ಅವನ ಪ್ರಾಣ ಪಕ್ಷಿ ಅಲ್ಲೇ ಹಾರಿ ಹೋಗಿತ್ತು.ಆ ಜನ ವಸತಿ ರಹಿತ ಪ್ರದೇಶದಲ್ಲಿ ಢಿಕ್ಕಿ ಹೊಡೆದ ಲಾರಿ ರಾಯರದ್ದೇ ಎಂದು ಕೊನೆಗೂ ಯಾರಿಗೂ ತಿಳಿಯಲೇ ಇಲ್ಲ.
    ಮರುದಿನ ಎಲ್ಲೆಡೆ ಸುದ್ದಿಯಾಗಿತ್ತು.ನೀಲಕ್ಕನ ಮಗ ನಿನ್ನೆ ಬೈಕ್ ಆಕ್ಸಿಡೆಂಟ್ ನಲ್ಲಿ ತೀರಿ ಹೋದನಂತೆ,ರಾಯರ ಬಗ್ಗೆ ಪೋಲೀಸ್ ಕೇಸು ಕೊಟ್ಟಿದ್ದು ಅವನೇ ಅಂತೆ.ಅವನು ರಾಯರ ಭೂತದ ಉಪದ್ರವದಿಂದಲೇ ಸತ್ತಿದ್ದು ಅಂತ ಕಾಣುತ್ತೆ.ಅವರನ್ನು ಎದುರು ಹಾಕಿಕೊಂಡ್ರೆ ಬರ್ಕತ್ತಾಗಲಿಕ್ಕುಂಟಾ?....ಎಂದು ಊರಿಡೀ ಸುದ್ದಿಯಾಯಿತು.ಆದರೆ ನೀಲಕ್ಕನಿಗೆ ಎಲ್ಲ ಅರ್ಥವಾಗತೊಡಗಿತ್ತು.ಯಾರದೋ ಒತ್ತಡಕ್ಕೆ ಬಲಿಯಾಗಿ ತನ್ನ ಮಗ ತಂದುಕೊಂಡ ದುರಂತದ ಸಾವೆಂದು ಅವಳ ಮನಸ್ಸು ಹೇಳುತ್ತಿತ್ತು.
    ಈ ದುರಂತ ನಡೆದ ನಂತರ ಸೌಮ್ಯಳ ಮನಸ್ಸು ಕೂಡಾ ಅಲ್ಲೋಲಕಲ್ಲೋಲವಾಗಿತ್ತು.ಚಂದ್ರನನ್ನು ಕಳೆದುಕೊಂಡ ಆಕೆಯ ಹೃದಯ ಕತ್ತಲಾಗಿತ್ತು.ಮನಸಾರೆ ಪ್ರೀತಿಸುತ್ತಿದ್ದ ಆಕೆಗೆ ಅವನಿಲ್ಲದೆ ಹೃದಯ ನೋವಿನ ಕಡಲಾಗಿತ್ತು.ತನ್ನ ತಂದೆಯವರೇ ಈ ಘಟನೆಗೆ ಕಾರಣವೆಂದು ತಿಳಿದಾಗ "ನಾನು ಯಾಕಾದರೂ ಈ ಮನೆಯಲ್ಲಿ ಹುಟ್ಟಿದೆ?ನನ್ನ ಯಾವ ತಪ್ಪಿಗೆ ಈ ಶಿಕ್ಷೆ" ಎಂದು ಮನಸ್ಸು ರೋದಿಸುತ್ತಿತ್ತು.ಅವಳ ಬದುಕು ಕಳೆಗುಂದಿತ್ತು.ಆದರೆ ಇದು ಯಾವುದೂ ರಾಯರ ಗಮನಕ್ಕೇ ಬಂದಿರಲಿಲ್ಲ.ತನ್ನ ಶತ್ರುವೊಬ್ಬನನ್ನು ಮುಗಿಸಿದ ಸಂತೋಷದಲ್ಲಿ ಅವರು ತೇಲಾಡುತ್ತಿದ್ದರು.
     ಈ ನಿಮಿತ್ತ ರಾಯರ ಮನೆಯಲ್ಲಿ ದೈವದ ನೇಮಕ್ಕೆ ತಯಾರಿ ನಡೆಯುತ್ತಿತ್ತು.ಗಗ್ಗರದ ದನಿ ಕೇಳುತ್ತಿದ್ದಂತೆ ಮುಖದಲ್ಲಿ ಮಂದಹಾಸವೊಂದು ಮಿಂಚಿ ಮಾಯವಾಗುತ್ತಿತ್ತು.ತನ್ನ ಗುರಿ ಸಾಧಿಸಿದ ಸಂತೃಪ್ತಿ ಮುಖದಲ್ಲಿ ಎದ್ದು ಕಾಣುತ್ತಿತ್ತು.ಇಷ್ಟೆಲ್ಲಾ ಸಂಭ್ರಮಗಳ ನಡುವೆ ತಮ್ಮ ಮುದ್ದಿನ ಮಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.ಮಗಳು ಎಲ್ಲೂ ಕಾಣದಿದ್ದುದನ್ನು ಕಂಡು ಮನಸ್ಸು ಕಳವಳಗೊಂಡು ಹುಡುಕುತ್ತಿದ್ದಾಗ ಮನೆಯ ಕೊಟ್ಟಿಗೆಯ ಪಕ್ಕಾಸಿನಲ್ಲಿ ಸೌಮ್ಯಳ ಶವ ನೇತಾಡುತಿತ್ತು.ಅದರ ಕಾರಣ ತಿಳಿಯುವ ಹೊತ್ತಿಗೆ ಕಾಲ ಮಿಂಚಿತ್ತು.
                 *********************

1 ಕಾಮೆಂಟ್‌:

  1. ಅಪ್ಪಟ ಕರಾವಳಿ ಶೈಲಿಯಲ್ಲಿ ಮೂಡಿಬಂದ ಕತೆ, ಮೂಢನಂಬಿಕೆಗಳ ವಿರುದ್ಧ ದನಿ ಎತ್ತುವುದಲ್ಲದೆ ಧಣಿಗಳೆನಿಸಿಕೊಂಡವರು ಬಡವರ ಮೇಲೆ ನಡೆಸುವ ಶೋಷಣೆ ಚಿತ್ರಣ ಕಟ್ಟಿ ಕೊಡುತ್ತದೆ. ದೈವ ಸತ್ಯಕ್ಕೆ ಇಂಬು ಕೊಡುತ್ತದೆಯೇ ಹೊರತು ದುಷ್ಟತನಕ್ಕಲ್ಲ ಎಂಬುದಕ್ಕೆ ಶ್ಯಾಮರಾಯರ ಮಗಳ ಸಾವೇ ಸಾಕ್ಷಿ.
    ಚಂದದ ಕಥೆ...

    ಪ್ರತ್ಯುತ್ತರಅಳಿಸಿ